Monday, 24 July 2023

ಪುರಾತನದಿಂದ ವರ್ತಮಾನದವರೆಗೂ ಗಮನ ಸೆಳೆದಿರುವ ಚಾತಕ ಪಕ್ಷಿ - Jacobin Cuckoo!!

ಏನೆಂದು ಬಣ್ಣಿಸಲಿ ನಿನ್ನ ಮಹಿಮೆಯ ಓ ಚಾತಕ ಪಕ್ಷಿಯೇ!? ಪುರಾಣದಲಿ ಜಾನಪದದಲಿ ಕಾಳಿದಾಸ ತುಳಸೀದಾಸ ಕುವೆಂಪುರಾದಿಯಾಗಿ ಕವಿವರ್ಯರ ವಿರಹ ಕಾವ್ಯ ಸಾಲುಗಳಲಿ ಮೆರೆಯುತಿರುವ ಉಪಮೆಯೇ ಏನು ನಿನ್ನ ಲೀಲೆ!? ಇಂದಿಗೂ ಪ್ರೇಮಿಗಳ ವಿಚಾರ ಬಂದಾಗ ನಿನ್ನ ಪ್ರೀತಿಗಾಗಿ ಸಿಗುವಿಕೆಗಾಗಿ 'ಚಾತಕ ಪಕ್ಷಿಯಂತೆ ಕಾಯುವೆ' ಎನ್ನುವ ಮಾತು ಪ್ರಚಲಿತ. ಕವಿ-ಪ್ರೇಮಿಗಳಿಗೆ ಪ್ರೀತಿ-ವಿರಹದ ಉತ್ಕಟತೆ ವ್ಯಕ್ತಪಡಿಸಲು ಕವಿಸಮಯವಾದರೆ, ವಿಜ್ಞಾನಿ-ರೈತರಿಗೆ ಮುಂಗಾರು ಮಳೆ ಮುನ್ಸೂಚನೆಯ ಶುಭಸೂಚಕವಾಗಿ ‘ಮಾರುತಗಳ ಮುಂಗಾಮಿ’ ಯಾಗಿವೆ.

ಚಾತಕ ಪಕ್ಷಿ  ಕೋಗಿಲೆ ಜಾತಿಗೆ ಸೇರಿದ ಹಕ್ಕಿ .ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಕಂಡುಬರುವ ಇವು ಚಾತಕ ಪಕ್ಷಿ, ಚೊಟ್ಟಿ ಕೋಗಿಲೆ, ಗಲಾಟೆ ಕೋಗಿಲೆ, ಶಾರಂಗ, ಮಾತಂಗ, ಮಾರುತಗಳ ಮುಂಗಾಮಿ, Pied cuckoo, Jacobin Cuckoo (Clamator jacobinus) ಎಂದು ನಾನಾ ಹೆಸರುಗಳಿಂದ ಕರೆಯಲ್ಪಡುತ್ತವೆ.

ಚಾತಕ ಪಕ್ಷಿಯು ಆಕಾಶದೆಡೆಗೆ ಬಾಯಿ ತೆಗೆದು ಮಳೆಯ ನೀರನ್ನು ಮಾತ್ರ ಕುಡಿಯುತ್ತದೆಂದು, ಇಲ್ಲವಾದಲ್ಲಿ ಎಷ್ಟೋ ದಿನಗಳವರೆಗೆ ನೀರು ಕುಡಿಯದೇ ಬದುಕುತ್ತದೆ ಎಂಬ ನಂಬಿಕೆ ಇದೆ. ಭಾರತ ದೇಶದಲ್ಲಿನ ಮುಂಗಾರು ಮಳೆಗೂ ಮತ್ತು ಈ ಪಕ್ಷಿಗೂ ಅವಿನಾಭಾವ ಸಂಭಂದವಿದೆ. 

ಮುಂಗಾರ ಮಳೆಯು ಬರುವ ಸುಮಾರು ಒಂದು ವಾರದ ಮುಂಚೆ  ಹಲಾವಾರು ಸಂಖ್ಯೆಯಲ್ಲಿ ಚಾತಕ ಪಕ್ಷಿಗಳು ಕಂಡುಬರುತ್ತವೆ. ಇವುಗಳು ನಮ್ಮ ದೇಶದಲ್ಲೂ ಅನೇಕ ಭಾಗಗಳಲ್ಲಿ ಕಾಣಿಸಿಕೊಂಡು ಪೀವ್ ಪಿಯು ಪಿಯು… ಪೀವ್ ಪಿಯು ಪಿಯು… ಪೀವ್ ಪಿಯು ಪಿಯು… ಎಂದು ಜೋರಾಗಿ ಲೋಹದ ಕಂಠದಲ್ಲಿ ಇಂಪಾಾಗಿ ಹಾಡಲಾರಂಭಿಸಿದರಂತೂ ಮುಂಗಾರು ಶುರುವಾಯಿತು, ಖಂಡಿತ ಮಳೆಯಾಗುತ್ತದೆ. ಮಳೆರಾಯನಿಗೂ ಜಾತಕ ಪಕ್ಷಿಗಳಿಗೂ ನಂಟು ಉಂಟು, ಇವುಗಳು ಮಳೆ ನೀರನ್ನು ಬಿಟ್ಟು ಬೇರೆ ಯಾವುದೇ ಮೂಲದ ನೀರನ್ನು ಕುಡಿಯುವುದಿಲ್ಲ ಎಂಬುದು ರೈತಾಪಿ ಜನರ ಕವಿವರ್ಯರ ಪೂರ್ಣ ನಂಬಿಕೆ. 

ಇಷ್ಟೊಂದು ಪ್ರಖ್ಯಾತಿ ಪಡೆದಿರುವ ಜಾತಕ ಪಕ್ಷಿಗಳು ಅನೇಕ ಊಹಾಪೋಹ ಕಥೆಗಳನ್ನು ಹೊಂದಿದ್ದು, ವಾಸ್ತವವಾಗಿ ಹವಾಮಾನ ಬದಲಾವಣೆಗೆ ತಕ್ಕಂತೆ ಸ್ಪಂದಿಸುವುದರಿಂದ ಜನರ ಗಮನ ಸೆಳೆದಿವೆ ಎನ್ನಬಹುದು. ಅಂದರೆ ಆಫ್ರಿಕಾದಿಂದ ಮುಂಗಾರು ಮಾರುತಗಳ ಸಹಾಯ ಪಡೆದು ಸಮುದ್ರದ ಮೂಲಕವಾಗಿ ವಲಸೆ ಬಂದು ಇಲ್ಲಿ ಇರುವ ತನಕ ಸಂತಾನೋತ್ಪತ್ತಿ ಹೆಚ್ಚಿಸಿಕೊಂಡು ಚಳಿಗಾಲದ ಸಮಯಕ್ಕೆ ಉತ್ತರ ಭಾರತದ ಮೂಲಕ ಆಫ್ರಿಕಾದ ಕಡೆಗೆ ವಲಸೆ ಹೋಗುತ್ತವೆ ಎಂಬುದು ಪರಿಸರ ತಜ್ಞರ ಅಭಿಪ್ರಾಯ.

ಒಟ್ಟಿನಲ್ಲಿ ಸತ್ಯ ಮಿಥ್ಯಗಳು ಏನೇ ಇದ್ದರೂ ಜಾತಕ ಪಕ್ಷಿಗಳು ಶುಭ ಸೂಚಕಗಳಾಗಿ ಗುರುತಿಸಿಕೊಂಡಿವೆ. ಮುಂಗಾರು ಮಳೆಗೆ ಅವುಗಳ ಕಾಯುವಿಕೆಯ ವಿಚಾರದಿಂದ ತಾಳುವಿಕೆಗಿಂತ ತಪವು ಇಲ್ಲ, ತಾಳಿದವನು ಬಾಳಿಯಾನು ಎಂಬ ಸಂದೇಶವನ್ನು ಮನುಕುಲದ ಜನಾಂಗಕ್ಕೆ ನೆನಪಿಸುತ್ತಾ ಬಂದಿವೆ.



ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು

ಸರ್ವರಿಗೂ ಸ್ವಾಮಿ ವಿವೇಕಾನಂದರ ದಿನಾಚರಣೆಯ /ರಾಷ್ಟ್ರೀಯ ಯುವ ದಿನದ ಶುಭಾಶಯಗಳು 💐 ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು ನಿಮಗಾಗಿ. ಇಂದಿನ ಜಗತ...