Showing posts with label ಸಹಾಯಲೋಕ-Helping Hands. Show all posts
Showing posts with label ಸಹಾಯಲೋಕ-Helping Hands. Show all posts

Saturday, 11 January 2025

ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು

ಸರ್ವರಿಗೂ ಸ್ವಾಮಿ ವಿವೇಕಾನಂದರ ದಿನಾಚರಣೆಯ /ರಾಷ್ಟ್ರೀಯ ಯುವ ದಿನದ ಶುಭಾಶಯಗಳು 💐

ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು ನಿಮಗಾಗಿ.

ಇಂದಿನ ಜಗತ್ತಿನಲ್ಲಿ ಶಿಕ್ಷಣ ಸಾಗುತ್ತಿರುವ ದಾರಿ, ಧರ್ಮ ಧರ್ಮಗಳ ನಡುವಿನ ದಳ್ಳುರಿ, ಯುವಜನತೆ ಎದುರಿಸುತ್ತಿರುವ ಸವಾಲುಗಳು, ಯುದ್ಧ/ಗಲಭೆ ಭಯ, ಡಿಜಿಟಲ್ ಯುಗದ ನೆಮ್ಮದಿ ಇಲ್ಲದ ಜೀವನದ ನಾನಾ ಸಮಸ್ಯೆಗಳು ಸೇರಿದಂತೆ ಮಹಿಳೆಯರ ಸಬಲೀಕರಣ, ಆಧ್ಯಾತ್ಮ & ವಿಜ್ಞಾನದ ಕುರಿತು ಅವರ ವಿಚಾರಗಳು ಇಂದಿಗೂ ಸಮಾಜದ ಸಮಸ್ಯೆಗಳಿಗೆ ಚಿಕಿತ್ಸಾದಾಯಕವಾಗಿವೆ.

ಸೇವೆಯ ಮಹತ್ವ:

ವಿವೇಕಾನಂದರು ಹೇಳುವಂತೆ " ತ್ಯಾಗ ಮತ್ತು ಸೇವೆ ನಮ್ಮ ದೇಶದ ಎರಡು ಆದರ್ಶಗಳು" ಅವುಗಳಲ್ಲಿ ನಾವೆಲ್ಲರೂ ತೊಡಗಿಸಿಕೊಂಡರೆ ಉಳಿದುದೆಲ್ಲವೂ ತಾನಾಗಿಯೇ ಸರಿಯಾಗುತ್ತದೆ. ಸ್ವಾರ್ಥರಹಿತ ಸೇವೆ ಮತ್ತು ತ್ಯಾಗದಿಂದ ಮಾತ್ರ ವ್ಯಕ್ತಿ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ ಎಂಬ ಅವರ ಬೋಧನೆ ಮನ ಮನೆಗಳಲ್ಲಿ ಅನುಷ್ಟಾನವಾಗಬೇಕಿದೆ.

ಮಾನವ ಸೇವೆಯೇ ಮಾಧವನ ಸೇವೆ/ ಜನರ ಸೇವೆಯೇ ಜನಾರ್ಧನನ ಸೇವೆ ಎಂಬ ಅವರ ಸಲಹೆಯಂತೆ, ಸ್ವಾರ್ಥತೆ ಹೆಚ್ಚುತ್ತಿರುವ ಜಗತ್ತಿನಲ್ಲಿ ನಿಸ್ವಾರ್ಥತೆ ಬೆಳೆಯಬೇಕಿದೆ. ಸಮಾಜದಲ್ಲಿ ಪರೋಪಕಾರ ಮನೋಭಾವ ಮತ್ತಷ್ಟು ಹೆಚ್ಚಾಗಬೇಕಿದೆ. , ಬಡವರ ಸೇವೆಗೆ , ಕಡೆಗಣಿಸಲ್ಪಟ್ಟವರ ಏಳಿಗೆಗೆ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸೇವೆಯೇ ಕರ್ತವ್ಯ ಎಂಬ ದೃಷ್ಟಿಯಲ್ಲಿ ದುಡಿಯಬೇಕಿದೆ.

ನಿಜವಾದ ಶಿಕ್ಷಣದ ಅರಿವು:

ವಿವೇಕಾನಂದರು ಶಿಕ್ಷಣದ ಬಗ್ಗೆ ಹೊಂದಿದ್ದ ದೃಷ್ಟಿಕೋನ ಇಂದಿಗೂ ಮಾರ್ಗದರ್ಶಿಯಾಗಿದೆ. 

"ಶಿಕ್ಷಣ ಎಂದರೆ ಮನುಷ್ಯನಲ್ಲಿ ಅಡಗಿರುವ ಪೂರ್ಣತೆಯ ಅಭಿವ್ಯಕ್ತಿ". ಕೇವಲ ಪುಸ್ತಕ ಜ್ಞಾನವಲ್ಲದೆ, ಚಾರಿತ್ರ್ಯ ನಿರ್ಮಾಣ, ಮಾನವೀಯ ಮೌಲ್ಯಗಳ ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಾಸವನ್ನು ಒಳಗೊಂಡ ಸಮಗ್ರ ಶಿಕ್ಷಣದ ಪರಿಕಲ್ಪನೆ ಅವರದು.

ಡಿಜಿಟಲ್ ಯುಗದ ಮಾನಸಿಕ ಒತ್ತಡ ಮತ್ತು ಜೀವನದ ಉದ್ದೇಶದ ಹುಡುಕಾಟದಲ್ಲಿ ಅವರ ಮಾರ್ಗದರ್ಶನ ಅತ್ಯಂತ ಮೌಲ್ಯಯುತವಾಗಿದೆ.

ನಿಜವಾದ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಜೀವನದ ಕೌಶಲ್ಯಗಳ ವಿಕಾಸವಾಗಬೇಕಿದೆ. ಅವರ ನಂಬಿಕೆಯಂತೆ ಭಯ ಮತ್ತು ಒತ್ತಡ ಹೋಗಲಾಡಿಸಿ ಕುತೂಹಲ ಮತ್ತು ಆಸಕ್ತಿಯಿಂದ ಕಲಿಕೆ ನಡೆಸಲು ಶಿಕ್ಷಣ ವ್ಯವಸ್ಥೆ ಶ್ರಮಿಸಬೇಕಿದೆ.

ಯುವ ಜನಾಂಗಕ್ಕೆ ವಿವೇಕಾನಂದರ ಮಾತುಗಳು:

ಯುವಕರು ಒಂದು ರಾಷ್ಟ್ರದ ಭವಿಷ್ಯವೆಂದು ಬಲವಾಗಿ ನಂಬಿದ್ದರು. ಈ ನಿಟ್ಟಿನಲ್ಲಿ ಯುವ ಜನತೆಗೆ ಸರಿಯಾದ ನಿಟ್ಟಿನಲ್ಲಿ ಮಾರ್ಗದರ್ಶನ ಮತ್ತು ಸ್ಪೂರ್ತಿ ಅವಶ್ಯವಾಗಿದೆ.

"ಎದ್ದೇಳಿ, ಎಚ್ಚರಗೊಳ್ಳಿ, ಗುರಿ ತಲುಪುವವರೆಗೆ ನಿಲ್ಲದಿರಿ" ಎಂಬ ಅವರ ಪ್ರಸಿದ್ಧ ಮಾತುಗಳು ಇಂದಿಗೂ ಯುವಕರಿಗೆ ಸ್ಫೂರ್ತಿಯ ಮೂಲವಾಗಿವೆ. ಅವರು ಬೋಧಿಸಿದ ಆತ್ಮವಿಶ್ವಾಸ, ಧೈರ್ಯ, ಮತ್ತು ಸ್ವಾವಲಂಬನೆಯ ತತ್ವಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತ್ಯಗತ್ಯವಾಗಿವೆ.

ಯುವಕರೇ ಎದ್ದೇಳಿ, ಜಗತ್ತನ್ನು ಬದಲಾಯಿಸಿ ಎಂಬ ಅವರ ಮಾತು ಅರಿತು ಇಂದಿನ ಯುವಜನತೆ ತಮ್ಮ ಶಕ್ತಿಯನ್ನು ಅರಿತು, ಯಾವುದೇ ಅನೈತಿಕ ಅಮಾನವೀಯತೆ ಕಡೆಗೆ ಬಲಿಯಾಗದೆ, ನಿಸ್ವಾರ್ಥತೆ, ಮಾನವ ಪ್ರೇಮ, ಸೇವೆ ತ್ಯಾಗ ಭಾವದಲ್ಲಿ ಸಮಾಜದ ರಾಷ್ಟ್ರದ ಒಳಿತಿಗೆ ದುಡಿಯಬೇಕಿದೆ. ಸರ್ಕಾರ, ಮೀಡಿಯಾಗಳು, ಸಾಹಿತಿಗಳು, ಸ್ವಾಮೀಜಿಗಳು, ಶಿಕ್ಷಕರು ಸೇರಿದಂತೆ ಎಲ್ಲರೂ ಈ ನಿಟ್ಟಿನಲ್ಲಿ ಯುವಜನತೆಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಬೇಕಿದೆ. ವಿವೇಕಾನಂದರ ಚಿಂತನೆಯಂತೆ ಯುವಕರಲ್ಲಿ ಧೈರ್ಯ, ಆತ್ಮವಿಶ್ವಾಸ, ಸ್ವ ನಂಬಿಕೆ, ಸ್ವಾವಲಂಬನೆಯ ತತ್ತ್ವಗಳು ಮತ್ತು ರಾಷ್ಟ್ರ ಪ್ರೇಮ ಇರುವಂತೆ ನೋಡಿಕೊಳ್ಳಬೇಕಿದೆ. ಸ್ಪರ್ಧಾತ್ಮಕ ಜಗದಲ್ಲಿನ ಯುವಜನತೆಯ ಮಾನಸಿಕ ಒತ್ತಡ ಇತರೆ ಸಮಸ್ಯೆಗಳಿಗೆ ಸೂಕ್ತ ಸಲಹೆ, ಯೋಜನೆ ನೀಡಿ ಪರಿಹರಿಸಬೇಕಿದೆ ಮಾನಸಿಕ ಈ ನಿಟ್ಟಿನಲ್ಲಿ ದೇಶದ ಭವಿಷ್ಯಕ್ಕೆ ಭದ್ರ ಬುನಾದಿಯಾಕಬೇಕಿದೆ.


ಧರ್ಮ - ಆಧ್ಯಾತ್ಮ - ವಿಜ್ಞಾನ:

ಧರ್ಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಅವರ ವೈಜ್ಞಾನಿಕ ದೃಷ್ಟಿಕೋನ ಇಂದಿನ ಜಾಗತಿಕ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತ. 

ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಪರಸ್ಪರ ವಿರೋಧಿಗಳಲ್ಲ ಅವು ಒಂದೇ ನಾಣ್ಯದ ಎರಡು ಮುಖಗಳು ಎಂದು ಅವರು ಹೇಳಿದಂತೆ ತಂತ್ರಜ್ಞಾನ ಯುಗದಲ್ಲಿ ಅವುಗಳ ಸಮನ್ವಯ ಅತ್ಯಗತ್ಯವಾಗಿದೆ.

ಎಲ್ಲಾ ಧರ್ಮಗಳ ಸಾರವೊಂದೇ ಎಂಬ ಅವರ ಬೋಧನೆ ಧಾರ್ಮಿಕ ಸಾಮರಸ್ಯ ಮತ್ತು ವಿಶ್ವಶಾಂತಿಗೆ ಮಾರ್ಗದರ್ಶಿಯಾಗಿದೆ.

ಎಲ್ಲಾ ಧರ್ಮಗಳು, ಸಂಸ್ಕೃತಿಗಳು ಒಂದೇ ಗುರಿಯತ್ತ ಸಾಗುವ ವಿಭಿನ್ನ ದಾರಿಗಳು ಎಂಬ ಅವರ ವಿಚಾರನ್ನು ಅರಿತು ಪರಸ್ಪರ ಗೌರವದಿಂದ ಶಾಂತಿಯಿಂದ ಬದುಕಬೇಕಾಗಿದೆ.

ಈ ನಿಟ್ಟಿನಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಸಹಬಾಳ್ವೆಗೆ ಧರ್ಮಾತೀತವಾಗಿ ಸರ್ಕಾರ , ಮೀಡಿಯಾಗಳು, ಧಾರ್ಮಿಕ ಮುಖಂಡರು, ಶಿಕ್ಷಕರು ಚಿಂತನ ಮಂಥನ ಮಾಡಿ ಸಮಾಜವನ್ನು ಕಟ್ಟಬೇಕಿದೆ.

ಈ ರೀತಿ ಉತ್ತಮ ಸಮಾಜ ನಿರ್ಮಾಣಕ್ಕೆ ಬೇಕಾದ ಎಲ್ಲಾ ಆಯಾಮಗಳಲ್ಲೂ ವಿವೇಕಾನಂದರ ಚಿಂತನೆಗಳನ್ನು ಕಾಣಬಹುದಾಗಿದೆ.

ಮಹಿಳಾ ಸಬಲೀಕರಣದ ಬಗ್ಗೆ ಅವರ ವಿಚಾರಗಳು ಇಂದಿಗೂ ಪ್ರಸ್ತುತ. ಮಹಿಳೆಯರ ಶಿಕ್ಷಣ ಮತ್ತು ಸ್ವಾವಲಂಬನೆಯ ಮೇಲೆ ಅವರು ನೀಡಿದ ಒತ್ತು ಇಂದಿನ ಲಿಂಗ ಸಮಾನತೆಯ ಹೋರಾಟಕ್ಕೆ ಮಾರ್ಗದರ್ಶಿಯಾಗಿದೆ.

ಸಾಮಾಜಿಕ ಸೇವೆ ಮತ್ತು ಮಾನವೀಯತೆಯ ಬಗ್ಗೆ ಅವರ ಕಾಳಜಿ ಇಂದಿನ ಸ್ವಾರ್ಥಪರ ಜಗತ್ತಿಗೆ ಒಂದು ಪಾಠ. "ಜೀವ ಸೇವೆಯೇ ಶಿವ ಸೇವೆ" ಎಂಬ ಅವರ ಮಾತು ಸಮಾಜ ಸೇವೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಏಳಿ, ಎದ್ದೇಳಿ, ಎಚ್ಚರಗೊಳ್ಳಿರಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ. ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ. ಕೇವಲ ಯೋಚನೆಗಳಿಂದ ಮಾತ್ರವೇ ಸಾಧನೆ ಸಾದ್ಯವಿಲ್ಲ. ಕಾರ್ಯಪ್ರವೃತ್ತರಾಗಬೇಕು. ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು. ಎಂಬ ವಿವೇಕಾನಂದರ ಕಿಡಿ ನುಡಿಗಳು ನಮ್ಮ ಒಳಹೊಕ್ಕು ಫಲಿತವಾಗಬೇಕಾಗಿದೆ.

ಆತ್ಮವಿಶ್ವಾಸ ಮತ್ತು ಸ್ವ ನಂಬಿಕೆ:

ನಿಮ್ಮ ಮೇಲೆ ನೀವು ನಂಬಿಕೆ ಇಟ್ಟರೆ ಅರ್ಧ ಕೆಲಸ ಆದಂತೆಯೇ ಎಂಬ ಅವರ ಮಾತು ಒತ್ತಡ ಜೀವನದಲ್ಲಿ ಯಶಸ್ಸಿಗೆ ಸ್ಪೂರ್ತಿ ತುಂಬುತ್ತದೆ. ಜೀವನೋತ್ಸಾಹ ಚಿಮ್ಮಿಸುತ್ತದೆ.

ಒಂದು ವಿಚಾರ ಅಥವಾ ಆಲೋಚನೆಯನ್ನು ತೆಗೆದುಕೊಳ್ಳಿ, ಅದನ್ನೇ ನಿಮ್ಮ ಜೀವನವನ್ನಾಗಿ ಮಾಡಿ - ಅದರ ಬಗ್ಗೆ ಯೋಚಿಸಿ , ಕನಸು ಕಾಣಿ , ಆ ವಿಚಾರ /ಆಲೋಚನೆಯ ಮೇಲೆ ಬದುಕಿ ಎಂಬ ಮಾತು ಆತ್ಮಶಕ್ತಿಯ ಮೇಲೆ ನಂಬಿಕೆ ಇಟ್ಟು ಸ್ವಯಂ ಅರಿವಿನೊಂದಿಗೆ ಬದುಕಲು ಪ್ರೇರೇಪಿಸುತ್ತದೆ.

ಪ್ರಪಂಚದ ಕೆಲವು ಭಾಗಗಳು ಸೇರಿದಂತೆ ಭಾರತದಾದ್ಯಂತ ಪ್ರವಾಸ ಮಾಡಿದ್ದ ಸ್ವಾಮಿ ವಿವೇಕಾನಂದರು ಜನಸಾಮಾನ್ಯರ ಸ್ಥಿತಿಯನ್ನು ನೋಡಿ ಚಿಂತಿತರಾಗಿದ್ದರು. ಸಮಾಜದ ಎಲ್ಲಾ ವರ್ಗಗಳ ಏಳಿಗೆಗೆ ದುಡಿಯಬೇಕೆಂದು ಬೋಧಿಸಿದ್ದಾರೆ. ಈ ನಿಟ್ಟಿನಲ್ಲಿ ಮತ್ತಷ್ಟು ಕಾರ್ಯಗಳಾಗಬೇಕಿದೆ.

ಇಂದಿನ ಭೌತಿಕವಾದಿ ಜಗತ್ತಿನಲ್ಲಿ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಅಗತ್ಯ ಹೆಚ್ಚಾಗಿದೆ. ವಿವೇಕಾನಂದರ ಯೋಗ ಮತ್ತು ಧ್ಯಾನದ ಬೋಧನೆಗಳು ಈ ನಿಟ್ಟಿನಲ್ಲಿ ಮಾರ್ಗದರ್ಶಿಯಾಗಿವೆ.

ಸ್ವಾಮಿ ವಿವೇಕಾನಂದರ ಬೋಧನೆಗಳು ಕಾಲಾತೀತವಾಗಿದ್ದು ಅವರ ವಿಚಾರಗಳು ಮತ್ತು ತತ್ವಗಳು ಇಂದಿನ ಜಗತ್ತಿನ ಸವಾಲುಗಳನ್ನು ಎದುರಿಸಲು ನಮಗೆ ಮಾರ್ಗದರ್ಶನ ನೀಡುತ್ತವೆ. ಜೀವನೋತ್ಸಾಹ ಬೆಳೆಸುತ್ತವೆ.ಅ ವರ ವಿಚಾರಗಳು ಭಾರತದ ಭವಿಷ್ಯಕ್ಕೆ, ಜಗದೊಳಿತಿಗೆ , ಸಾಮಾಜಿಕ ಪ್ರಗತಿಗೆ ದಾರಿದೀಪವಾಗಿದೆ.


:-

ಕೃಷ್ಣಮೂರ್ತಿ ಕೆ. ಎಸ್

 ೮೭೬೨೮೭೦೯೭೧

Wednesday, 6 June 2018

ಪ್ರಥಮ ಯೋಜನೆ: ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕೆಂಪಸಾಗರ (LPS Kempasagara)


ಪ್ರಥಮ ಯೋಜನೆ:ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕೆಂಪಸಾಗರ
ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿರುವ ಈ ಶಾಲೆ ತಾಲ್ಲೋಕಿಗೆ ಒಂದು ಮಾದರಿ ಶಾಲೆ. ಇಲ್ಲಿನ ಮುಖ್ಯಶಿಕ್ಷಕರು ಮತ್ತು ಸಹ ಶಿಕ್ಷಕರ ಶ್ರಮದಿಂದ ಶಾಲೆ ಹಸಿರಿನಿಂದ ಸಿಂಗರಿಸಿದ್ದು ಮಕ್ಕಳು ಜ್ಞಾನ ಲೋಕದಲ್ಲಿ ನೂರಾರು ಹೊಸ ಕನಸುಗಳೊಂದಿಗೆ ಕಂಗೊಳಿಸುತ್ತಿವೆ.
ಪ್ರಸ್ತುತ ಗ್ರಾಮದಲ್ಲಿ ಆಂಗ್ಲ ಶಾಲೆಗಳ ವ್ಯಾಮೋಹ ಜಾಸ್ತಿಯಾಗಿದ್ದು ದುಡಿದ ಬಹುಪಾಲನ್ನು ಪೋಷಕರು ಕಾನ್ವೆಂಟ್ ಶಾಲೆಗಳಿಗೆ ಸುರಿಯುತ್ತಿದ್ದಾರೆ. ಇಲ್ಲಿನ ಶಿಕ್ಷಕರು, ಸರ್ಕಾರೀ ಆಯೋಜಿತ ಶಿಕ್ಷಣದ ಜೊತೆಗೆ -ಇಲ್ಲಿನ ಹಳೇ ವಿದ್ಯಾರ್ಥಿಗಳು, ಇತರೆ ಸ್ನೇಹ ಸಹಾಯ ಹಸ್ತಗಳು ಸೇರಿದರೆ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದಾರೆ.

ಈ ನಿಟ್ಟಿನಲ್ಲಿ ಸಹಾಯಲೋಕ-Helping hands ನಿಂದ
 ಶನಿವಾರದಂದು ಶಾಲೆಗೆ ತೆರಳಿ ಅವರಿಗೆ ಆಂಗ್ಲ ಭಾಷೆ ಕಲಿಕೆ , ವಿಜ್ಞಾನ ಅನ್ವಯಗಳ ಪರಿಚಯ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಇತರ ಆಟ ಪಾಠಗಳ ಮೂಲಕ ಗ್ರಾಮೀಣ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಳಿಲ ಸೇವೆ ಮಾಡೋಣ...
Please share your ideas to mail id: krishnakempasagara@gmail.com








ಸಹಾಯಲೋಕ-Helping Hands


ಪೀಠಿಕೆ (Introduction):
ಬನ್ನಿ ಕೈಜೋಡಿಸಿ: ಗ್ರಾಮೀಣ ಸರ್ಕಾರಿ ಶಾಲೆಗಳ ಮತ್ತು ಅಲ್ಲಿನ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸೋಣ.
(Come, Lets join your hands for Rural school and Rural children overall developments)

೧) ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಕೊಡುಗೆ (Help to improve basic necessities of rural government schools)
೨) ಶನಿವಾರದಂದು ಶಾಲೆಗೆ ತೆರಳಿ ಅವರಿಗೆ ಆಂಗ್ಲ ಭಾಷೆ ಕಲಿಕೆ , ವಿಜ್ಞಾನ ಅನ್ವಯಗಳ ಪರಿಚಯ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಇತರ ಆಟ ಪಾಠಗಳ ಮೂಲಕ ಗ್ರಾಮೀಣ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಳಿಲ ಸೇವೆ ಮಾಡೋಣ..
(Will go to school on Saturday and help students for English learning, Science experiments, Cultural activities, sports etc. so that we can support teachers for overall children development)
೩) ಬಡ ಮಕ್ಕಳ ಶಿಕ್ಷಣ -ಯೋಗ ಕ್ಷೇಮಕ್ಕೆ ನೆರವಾಗೋಣ (We can support Rural poor children for their education and welfare)

ದೀಪದಿಂದ ದೀಪವ ಹಚ್ಚು ನೀನು ಮಾನವ: ಕೈಲಾದ ಮಟ್ಟಿಗೆ ಸೇವೆ ಮಾಡೋಣ: ನಾವು ಬದುಕೋಣ ಜೊತೆಗೆ ಇತರರಿಗೂ ಬದುಕಲು ನೆರವಾಗೋಣ...
(Instead of commenting on problems...lets take some initiative and start helping for those who really need)

ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು

ಸರ್ವರಿಗೂ ಸ್ವಾಮಿ ವಿವೇಕಾನಂದರ ದಿನಾಚರಣೆಯ /ರಾಷ್ಟ್ರೀಯ ಯುವ ದಿನದ ಶುಭಾಶಯಗಳು 💐 ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು ನಿಮಗಾಗಿ. ಇಂದಿನ ಜಗತ...