Showing posts with label ಕಥೆಗಳು. Show all posts
Showing posts with label ಕಥೆಗಳು. Show all posts

Sunday, 2 April 2017

ಉಪಾಯವಿದ್ದರೆ ಅಪಾಯವಿಲ್ಲ

ಜಾಣ ಮಂಗ ಮತ್ತು ಪೆದ್ದು ಮೊಸಳೆ:

ಒಂದು ಸುಂದರವಾದ ಕಾಡು. ಸದಾ ಹಚ್ಚ ಹಸಿರಿನಿಂದ ಕೂಡಿದ್ದು, ಹಣ್ಣುಗಳಿಂದ ತುಂಬಿರುವ ಗಿಡಮರಗಳಿದ್ದವು. ಸದಾ ತುಂಬಿ ಹರಿಯುವ ನದಿ ಪಕ್ಕದಲ್ಲಿ ಒಂದು ನೇರಲ ಹಣ್ಣಿನ ಮರವಿತ್ತು. 

ನೇರಳೆ ಮರದ ಮೇಲೆ ಕೊಬ್ಬಿದ ಗಂಡು ಮಂಗ ವಾಸಿಸುತ್ತಿತ್ತು. ನದಿಯ ಆಳವಾದ ಮಡುವಿನಲ್ಲಿ ಮೊಸಳೆಗಳು ವಾಸಿಸುತ್ತಿದ್ದವು. ಅದು ಹೇಗೋ ಗಂಡು ಮೊಸಳೆಗೂ ಮಂಗನಿಗೂ ಪರಿಚಯವಾಗಿ ಸ್ನೇಃಕ್ಕೆ ತಿರುಗಿತು. ಮಂಗ ತಾನು ಸಂಗ್ರಹಿಸಿದ ಹಣ್ಣನ್ನು ಮೊಸಳೆಗೆ ಕೊಡತೊಡಗಿತು. ಇದು ಪ್ರತಿದಿನವೂ ಮುಂದುವರಿಯಿತು. ಗಂಡು ಮೊಸಳೆ ಮಂಗ ಕೊಟ್ಟ ಹಣ್ಣನ್ನು ಮನೆಗೆ ತೆಗೆದುಕೊಂಡು ಹೋಗಿ ಹೆಂಡತಿಗೂ ಕೊಡುತ್ತಿತ್ತು. ಹೆಣ್ಣು ಮೊಸಳೆ ಹಣ್ಣುರುಚಿಗೆ ಮನಸೋತಿತು. ಅದಕ್ಕೆ ಇನ್ನೊಂದು ಯೋಚನೆ ಬಂತು. "ಇಷ್ಟು ರುಚಿಯಾದ ಹಣ್ಣುಗಳನ್ನು ದಿನಾಲೂ ತಿಂದು ಕೊಬ್ಬಿದ ಮಂಗನ ಮಾಂಸ ಎಷ್ಟು ಸಿಹಿಯಾಗಿರಬಹುದು' ಎಂದು. ಅದು ಗಂಡು ಮೊಸಳೆಯನ್ನು ಕರೆದು ಹಣ್ಣು ಕೊಡುವ ಮಂಗನನ್ನು ಕರೆದು ತರಲು ಒತ್ತಾಯಿಸತೊಡಗಿತು. ಗಂಡು ಮೊಸಳೆ ಎಷ್ಟು ಪರಿ ಪರಿಯಾಗಿ ಬೇಡಿಕೊಂಡರೂ ಹಠ ಬಿಡಲಿಲ್ಲ. ಮಂಗನನ್ನು ತಂದುಕೊಡುವವರೆಗೆ ತಾನೇನೂ ತಿನ್ನೋದೇ ಇಲ್ಲ ಎಂದು ಉಪವಾಸ ಕೂತಿತು. 

ಬೇರೆ ದಾರಿ ಕಾಣದ ಗಂಡು ಮೊಸಳೆ ನಿತ್ಯ ಮಂಗನನ್ನ ಭೇಟಿಯಾಗುತ್ತಿದ್ದ ಸ್ಥಳಕ್ಕೆ ಬಂತು. ಮಂಗಣ್ಣ ರುಚಿ ರುಚಿ ಹಣ್ಣುಗಳನ್ನು ಕೈಯಲ್ಲಿ ಹಿಡಿದು ಮೊಸಳೆಗೆ ಕೊಡಲು ಸಿದ್ಧವಾಗಿ ನಿಂತಿತ್ತು. ಆಗ ಮೊಸಳೆಯು, "ಮಂಗಣ್ಣ ದಿನವೂ ರುಚಿಯಾದ ಹಣ್ಣು ಕೊಡುವ ನಿನ್ನನ್ನು ಬೆನ್ನ ಮೇಲೆ ಕೂರಿಸಿಕೊಂಡು ಬರಲು ಹೆಂಡತಿ ಹೇಳಿದ್ದಾಳೆ. ಅವಳು ನಿನಗೆ ಧನ್ಯವಾದ ತಿಳಿಸಬೇಕಂತೆ' ಎಂದಿತು. ಕಪಟ ಅರಿಯದ ಮಂಗ ಮೊಸಳೆಯ ಬೆನ್ನೇರಿತು. ಅರ್ಧ ನದಿ ದಾಡುವ ಹೊತ್ತಿಗೆ ಮೊಸಳೆ ತನ್ನ ಹೆಂಡತಿಯ ಬಯಕೆಯನ್ನು, ತಾನು ಮಂಗನನ್ನು ಕರೆದೊಯ್ಯುತ್ತಿರುವ ಕಾರಣವನ್ನು ಹೇಳಿತು. 

ಮೊಸಳೆಯ ವಿಶ್ವಾಸದ್ರೋಹ ಕಂಡು ಮಂಗನಿಗೆ ಕಸಿವಿಸಿಯಾದರೂ ತೋರಿಸಿಕೊಳ್ಳಲಿಲ್ಲ. ಈ ಸಂಕಷ್ಟದಿಂದ ಪಾರಾಗುವ ಬಗೆಯನ್ನು ಯೋಚಿಸಿತು. ಕೂಡಲೇ ಅದಕ್ಕೊಂದು ಉಪಾಯ ಹೊಳೆಯಿತು. ಅದು ಮೊಸಳೆಯನ್ನು ಕರೆದು ಹೇಳಿತು, "ನೋಡು ನನ್ನ ಹೆಂಡತಿ ನನಗಿಂತ ಹೆಚ್ಚು ರುಚಿಯಾದ ಹಣ್ಣುಗಳು° ತಿಂದಿದ್ದಾಳೆ. ಅವಳ ಮಾಂಸ ನನಗಿಂತ ರುಚಿ. ವಾಪಾಸು ನನ್ನನ್ನು ಆ ಮರದ ಬಳಿ ಬಿಟ್ಟರೆ ನಾನವಳಲ್ಲಿ ಮಾತಾಡಿ ನಿನ್ನ ಜತೆ ಕಳುಹಿಸಿಕೊಡುತ್ತೇನೆ'ಮೊಸಳೆಗೆ ಹೌದಲ್ಲ! ಅನಿಸಿತು. ಅದು ಮಂಗಣ್ಣನ ಮಾತಿಗೆ ತಲೆದೂಗಿ ವಾಪಾಸು ಮರದ ಬಳಿ ಬಿಟ್ಟಿತು. ಮಂಗ ಛಂಗನೆ ದಡಕ್ಕೆ ನೆಗೆದು ಮರವೇರಿ ಬಿಟ್ಟಿತು. ಮಂಗಣ್ಣನ ಹೆಂಡತಿಗೆ ಕಾಯುತ್ತಿದ್ದ ಮೊಸಳೆಯನ್ನು ನೋಡಿ, "ನಿನ್ನಂಥ ವಿಶ್ವಾಸದ್ರೋಹಿ ಮೋಸಗಾರನನ್ನು ನಂಬಬಾರದಿತ್ತು. ಇಂದಿಗೆ ನನ್ನ ನಿನ್ನ ಸ್ನೇಃ ಕೊನೆಗೊಂಡಿತು. ಇಲ್ಲಿಂದ ತೊಲಗು' ಎಂದು ಛೀಮಾರಿ ಹಾಕಿತು. 

ಮೊಸಳೆಗೆ ತಪ್ಪಿನ ಅರಿವಾಗಿ ಪಶ್ಚಾತಾಪ ಪಡುತ್ತಾ ಮರಳಿ ಹೋಯಿತು. 

ನೀತಿ : ಉಪಾಯವಿದ್ದರೆ ಅಪಾಯವಿಲ್ಲ

ಕೃಪೆ: ಅಣ್ಣಾಜಿ ಫ‌ಡತಾರೆ (ಉದಯವಾಣಿ)

Sunday, 26 March 2017

ನೀತಿ ಕಥೆಗಳು


ನೀತಿ ಕಥೆಗಳು : ಕುರುಬನ ಜಾಣ್ಮೆ


ಚಂದ್ರನಗರದ ಅರಸ ಚಂದ್ರಸೇನನ ಏಕೈಕ ಪುತ್ರಿ ಸುಮತಿ ಎಂಬ ಹುಡುಗಿ ಇದ್ದಳು. ಇವಳು ತುಂಬ ಸುಂದರಳು, ಬುದ್ಧಿವಂತಳು ಆಗಿದ್ದಳು. ತನ್ನ ರೂಪ ಹಾಗೂ ಬುದ್ಧಿವಂತಿಕೆಯ ಬಗ್ಗೆ ಅವಳಿಗೆ ತುಂಬ ಹೆಮ್ಮೆಯಿತ್ತು. ಪ್ರೌಢಾವಸ್ಥೆಗೆ ಬಂದ ಮೇಲೆ ಅರಸ ಅವಳ ವಿವಾಹ ಮಾಡಲು ಬಯಸಿದ. ಆದರೆ ರಾಜಕುಮಾರಿ, ‘ಅಪ್ಪಾ ನನಗಿಂತ ಬುದ್ಧಿವಂತನಾಗಿರುವ ಯುವಕನ ಜೊತೆ ಮಾತ್ರ ನಾನು ಮದುವೆಯಾಗುವೆ’ ಎಂದು ಹೇಳಿದಳು.…
ಆದರೆ, ಅಂತಹ ಯುವಕನನ್ನು ಹುಡುಕುವುದು ಹೇಗೆ ಎಂದು ಅರಸನಿಗೆ ಚಿಂತೆಯಾಯಿತು. ‘ಅದನ್ನು ನನಗೆ ಬಿಡಿ’ ಎಂದು ಹೇಳಿದ ಸುಮತಿ ಆಳುಗಳ ಅವರ ಸಹಾಯದಿಂದ ಅರಮನೆಯ ಒಂದು ದೊಡ್ಡ ಮರಕ್ಕೆ ತೂಗುವ ಮಂಚವನ್ನು ಕಟ್ಟಿಸಿದಳು.
ಮರುದಿನ ಮುಂಜಾನೆ ಅರಸ ಮಗಳ ಆದೇಶದಂತೆ ತನ್ನ ರಾಜ್ಯದಲ್ಲಿ ಡಂಗುರ ಸಾರಿಸಿದ, ‘ಯಾರು ರಾಜಕುಮಾರಿ ಹಾಕುವ ಷರತ್ತನ್ನು ಗೆಲ್ಲುವರೋ ಅವರು ರಾಜಕುಮಾರಿಯನ್ನು ವಿವಾಹವಾಗಬಹುದು’ ಎಂದು. ರಾಜಕುಮಾರಿಯ ರೂಪ ಹಾಗೂ ಬುದ್ಧಿವಂತಿಕೆಯ ಖ್ಯಾತಿ ದೂರದವರೆಗೆ ಹರಡಿತ್ತು. ಹೀಗಾಗಿ ರಾಜಕುಮಾರಿಯನ್ನು ವರಿಸುವುದಕ್ಕಾಗಿ ದೂರದ ಊರುಗಳಿಂದ ರಾಜಕುಮಾರರು ಚಂದ್ರನಗರಕ್ಕೆ ಬಂದರು.
ರಾಜಕುಮಾರಿ ಮರಕ್ಕೆ ಕಟ್ಟಿದ ತೂಗುಮಂಚದಿಂದ ನನ್ನನ್ನು ಯಾರೂ ಕೆಳಗೆ ಇಳಿಸುವರೋ ಆ ಯುವಕನನ್ನು ತಾನು ಮದುವೆಯಾಗುವುದಾಗಿ ಅವಳು ಷರತ್ತು ವಿಧಿಸಿದಳು. ಬಂದ ರಾಜಕುಮಾರರೆಲ್ಲ ನಾನಾ ರೀತಿಯಿಂದ ಪ್ರಯತ್ನಿಸಿದರು. ಆದರೆ, ಯಾರಿಗೂ ಅವಳನ್ನು ತೂಗುಮಂಚದಿಂದ ಕೆಳಗಿಳಿಸಲು ಸಾಧ್ಯವಾಗಲಿಲ್ಲ.
ಅವರೆಲ್ಲ ನಿರಾಶರಾಗಿ ಹೊರಟುಹೋದರು. ಹೀಗೆ ಒಂದೆರಡು ದಿನಗಳು ಕಳೆದುಹೋದವು. ಅರಸನಿಗೆ ತುಂಬ ಚಿಂತೆಯಾಗತೊಡಗಿತು.
ಮಾರನೆಯ ದಿನ ಸಂಜೆ ಕುರಿ ಕಾಯುವವನೊಬ್ಬ ಚಂದ್ರನಗರಕ್ಕೆ ಬಂದ. ರಾಜಕುಮಾರಿಯ ಮದುವೆಯ ಸುದ್ದಿ ತಿಳಿದು ಅವನೂ ಅರಮನೆಯತ್ತ ಹೆಜ್ಜೆ ಹಾಕಿದ. ಅವನ ಜೊತೆಯಲ್ಲಿ ಒಂದು ಕುರಿ ಹಾಗೂ ಒಂದು ನಾಯಿ ಇದ್ದವು. ಅವನು ಕುರಿ ಹಾಗೂ ನಾಯಿಯನ್ನು ರಾಜಕುಮಾರಿ ಕುಳಿತ ಮರದ ಬಳಿಯಲ್ಲಿಯೇ ಇದ್ದ ಇನ್ನೊಂದು ಚಿಕ್ಕ ಮರಕ್ಕೆ ಸ್ವಲ್ಪ ಅಂತರದಲ್ಲಿ ಕಟ್ಟಿದ, ಆಮೇಲೆ ತನ್ನ ಜೋಳಿಗೆಯಿಂದ ಸ್ವಲ್ಪ ಮಾಂಸವನ್ನು ತೆಗೆದು ಕುರಿಯ ಮುಂದೆ ಹಾಕಿದನು. ಆಮೇಲೆ ಸ್ವಲ್ಪ ಹುಲ್ಲನ್ನು ತೆಗೆದು ನಾಯಿಯ ಮುಂದೆ ಹಾಕಿದನು. ರಾಜಕುಮಾರಿ ತುಂಬ ಕುತೂಹಲದಿಂದ ಅದನ್ನು ನೋಡುತ್ತಿದ್ದಳು. ರಾಜಕುಮಾರಿಗೆ ಅವನ ಮೂರ್ಖತನವನ್ನು ಕಂಡು ನಗೆ ಬಂತು.
ಅವಳು, ‘ಎಲೋ ಮೂರ್ಖ, ಕುರಿ ಮಾಂಸವನ್ನು, ನಾಯಿ ಹುಲ್ಲನ್ನು ತಿನ್ನುತ್ತವೆಯೇ ಎಂದು ಕೇಳಿದಳು. ಆದರೆ, ಈ ಕುರಿ ಕಾಯುವವನು ಅವಳು ಹೇಳಿದ್ದನ್ನು ಕೇಳಿಸಿಕೊಂಡಿಲ್ಲ ಎಂಬಂತೆ ವರ್ತಿಸಿದನು. ಆಗ ರಾಜಕುಮಾರಿ ಇನಷ್ಟು ಜೋರಾಗಿ ‘ಹುಲ್ಲನ್ನು ಕುರಿಯ ಎದುರಿಗೂ, ಮಾಂಸವನ್ನು ನಾಯಿಯ ಎದುರಿಗೂ ಹಾಕು’ ಎಂದಳು.
ಆಗಲೂ ಆ ಕುರುಬನು ಅದು ತನಗೆ ಏನು ಕೇಳಿಸಿಯೇ ಇಲ್ಲ ಎಂಬಂತೆ ವರ್ತಿಸಿದನು. ಆಗ ರಾಜಕುಮಾರಿಗೆ ತುಂಬ ಕೋಪ ಬಂತು. ‘ನಿನಗೇನು ಕಿವುಡೇ? ನಾನು ಹೇಳುತ್ತಿರುವುದು ನಿನಗೆ ಕೇಳಿಸುತ್ತಿಲ್ಲವೇ? ಎಂದಳು. ಆಗಲೂ ಅವನು ಮೌನವಾಗಿಯೇ ಇದ್ದನು. ಆಗ ರಾಜಕುಮಾರಿಗೆ ತಡೆದುಕೊಳ್ಳಲಾಗಲಿಲ್ಲ. ಅವಳು ತೂಗುಮಂಚದಿಂದ ಕೆಳಗಿಳಿದು ಅವನ ಬಳಿಗೆ ಬಂದು ಅವನ ಕಿವಿಯ ಬಳಿ ‘ನಾನು ಅಷ್ಟೊತ್ತಿನಿಂದ ಕಿರುಚುತ್ತಿದ್ದೇನೆ.’ ನಿನಗೆ ಕೇಳಿಸುತ್ತಿಲ್ಲವೇ?’ ಎಂದು ಜೋರಾಗಿ ಹೇಳಿದಳು. ಆಗ ಅವನು ಮುಗುಳ್ನಗುತ್ತ ‘ಕೇಳಿಸುತ್ತಿದೆ’ ಎಂದ.
ರಾಜಕುಮಾರಿ ದಿಗ್ಭ್ರಾಂತಳಾಗಿ ಅವನತ್ತ ನೋಡುತ್ತಾ ನಿಂತುಕೊಂಡಳು. ತಟ್ಟನೆ ಅವಳಿಗೆ ತನ್ನ ತಪ್ಪಿನ ಅರಿವಾಯ್ತು. ಮುಟ್ಟದೆ ಕುರಿ ಕಾಯುವವನು ಅವಳನ್ನು ತೂಗುಮಂಚದಿಂದ ಕೆಳಗೆ ಇಳಿಸಿದ್ದನು. ತನ್ನ ಷರತ್ತಿನಂತೆ ರಾಜಕುಮಾರಿ ಅವನ ಕೊರಳಿಗೆ ಮಾಲೆ ಹಾಕಬೇಕಾಯಿತು.

Krupe:  http://www.aralikatte.com/2016/11/21/kurubana-janme/

ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು

ಸರ್ವರಿಗೂ ಸ್ವಾಮಿ ವಿವೇಕಾನಂದರ ದಿನಾಚರಣೆಯ /ರಾಷ್ಟ್ರೀಯ ಯುವ ದಿನದ ಶುಭಾಶಯಗಳು 💐 ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು ನಿಮಗಾಗಿ. ಇಂದಿನ ಜಗತ...