Sunday, 2 April 2017

ಉಪಾಯವಿದ್ದರೆ ಅಪಾಯವಿಲ್ಲ

ಜಾಣ ಮಂಗ ಮತ್ತು ಪೆದ್ದು ಮೊಸಳೆ:

ಒಂದು ಸುಂದರವಾದ ಕಾಡು. ಸದಾ ಹಚ್ಚ ಹಸಿರಿನಿಂದ ಕೂಡಿದ್ದು, ಹಣ್ಣುಗಳಿಂದ ತುಂಬಿರುವ ಗಿಡಮರಗಳಿದ್ದವು. ಸದಾ ತುಂಬಿ ಹರಿಯುವ ನದಿ ಪಕ್ಕದಲ್ಲಿ ಒಂದು ನೇರಲ ಹಣ್ಣಿನ ಮರವಿತ್ತು. 

ನೇರಳೆ ಮರದ ಮೇಲೆ ಕೊಬ್ಬಿದ ಗಂಡು ಮಂಗ ವಾಸಿಸುತ್ತಿತ್ತು. ನದಿಯ ಆಳವಾದ ಮಡುವಿನಲ್ಲಿ ಮೊಸಳೆಗಳು ವಾಸಿಸುತ್ತಿದ್ದವು. ಅದು ಹೇಗೋ ಗಂಡು ಮೊಸಳೆಗೂ ಮಂಗನಿಗೂ ಪರಿಚಯವಾಗಿ ಸ್ನೇಃಕ್ಕೆ ತಿರುಗಿತು. ಮಂಗ ತಾನು ಸಂಗ್ರಹಿಸಿದ ಹಣ್ಣನ್ನು ಮೊಸಳೆಗೆ ಕೊಡತೊಡಗಿತು. ಇದು ಪ್ರತಿದಿನವೂ ಮುಂದುವರಿಯಿತು. ಗಂಡು ಮೊಸಳೆ ಮಂಗ ಕೊಟ್ಟ ಹಣ್ಣನ್ನು ಮನೆಗೆ ತೆಗೆದುಕೊಂಡು ಹೋಗಿ ಹೆಂಡತಿಗೂ ಕೊಡುತ್ತಿತ್ತು. ಹೆಣ್ಣು ಮೊಸಳೆ ಹಣ್ಣುರುಚಿಗೆ ಮನಸೋತಿತು. ಅದಕ್ಕೆ ಇನ್ನೊಂದು ಯೋಚನೆ ಬಂತು. "ಇಷ್ಟು ರುಚಿಯಾದ ಹಣ್ಣುಗಳನ್ನು ದಿನಾಲೂ ತಿಂದು ಕೊಬ್ಬಿದ ಮಂಗನ ಮಾಂಸ ಎಷ್ಟು ಸಿಹಿಯಾಗಿರಬಹುದು' ಎಂದು. ಅದು ಗಂಡು ಮೊಸಳೆಯನ್ನು ಕರೆದು ಹಣ್ಣು ಕೊಡುವ ಮಂಗನನ್ನು ಕರೆದು ತರಲು ಒತ್ತಾಯಿಸತೊಡಗಿತು. ಗಂಡು ಮೊಸಳೆ ಎಷ್ಟು ಪರಿ ಪರಿಯಾಗಿ ಬೇಡಿಕೊಂಡರೂ ಹಠ ಬಿಡಲಿಲ್ಲ. ಮಂಗನನ್ನು ತಂದುಕೊಡುವವರೆಗೆ ತಾನೇನೂ ತಿನ್ನೋದೇ ಇಲ್ಲ ಎಂದು ಉಪವಾಸ ಕೂತಿತು. 

ಬೇರೆ ದಾರಿ ಕಾಣದ ಗಂಡು ಮೊಸಳೆ ನಿತ್ಯ ಮಂಗನನ್ನ ಭೇಟಿಯಾಗುತ್ತಿದ್ದ ಸ್ಥಳಕ್ಕೆ ಬಂತು. ಮಂಗಣ್ಣ ರುಚಿ ರುಚಿ ಹಣ್ಣುಗಳನ್ನು ಕೈಯಲ್ಲಿ ಹಿಡಿದು ಮೊಸಳೆಗೆ ಕೊಡಲು ಸಿದ್ಧವಾಗಿ ನಿಂತಿತ್ತು. ಆಗ ಮೊಸಳೆಯು, "ಮಂಗಣ್ಣ ದಿನವೂ ರುಚಿಯಾದ ಹಣ್ಣು ಕೊಡುವ ನಿನ್ನನ್ನು ಬೆನ್ನ ಮೇಲೆ ಕೂರಿಸಿಕೊಂಡು ಬರಲು ಹೆಂಡತಿ ಹೇಳಿದ್ದಾಳೆ. ಅವಳು ನಿನಗೆ ಧನ್ಯವಾದ ತಿಳಿಸಬೇಕಂತೆ' ಎಂದಿತು. ಕಪಟ ಅರಿಯದ ಮಂಗ ಮೊಸಳೆಯ ಬೆನ್ನೇರಿತು. ಅರ್ಧ ನದಿ ದಾಡುವ ಹೊತ್ತಿಗೆ ಮೊಸಳೆ ತನ್ನ ಹೆಂಡತಿಯ ಬಯಕೆಯನ್ನು, ತಾನು ಮಂಗನನ್ನು ಕರೆದೊಯ್ಯುತ್ತಿರುವ ಕಾರಣವನ್ನು ಹೇಳಿತು. 

ಮೊಸಳೆಯ ವಿಶ್ವಾಸದ್ರೋಹ ಕಂಡು ಮಂಗನಿಗೆ ಕಸಿವಿಸಿಯಾದರೂ ತೋರಿಸಿಕೊಳ್ಳಲಿಲ್ಲ. ಈ ಸಂಕಷ್ಟದಿಂದ ಪಾರಾಗುವ ಬಗೆಯನ್ನು ಯೋಚಿಸಿತು. ಕೂಡಲೇ ಅದಕ್ಕೊಂದು ಉಪಾಯ ಹೊಳೆಯಿತು. ಅದು ಮೊಸಳೆಯನ್ನು ಕರೆದು ಹೇಳಿತು, "ನೋಡು ನನ್ನ ಹೆಂಡತಿ ನನಗಿಂತ ಹೆಚ್ಚು ರುಚಿಯಾದ ಹಣ್ಣುಗಳು° ತಿಂದಿದ್ದಾಳೆ. ಅವಳ ಮಾಂಸ ನನಗಿಂತ ರುಚಿ. ವಾಪಾಸು ನನ್ನನ್ನು ಆ ಮರದ ಬಳಿ ಬಿಟ್ಟರೆ ನಾನವಳಲ್ಲಿ ಮಾತಾಡಿ ನಿನ್ನ ಜತೆ ಕಳುಹಿಸಿಕೊಡುತ್ತೇನೆ'ಮೊಸಳೆಗೆ ಹೌದಲ್ಲ! ಅನಿಸಿತು. ಅದು ಮಂಗಣ್ಣನ ಮಾತಿಗೆ ತಲೆದೂಗಿ ವಾಪಾಸು ಮರದ ಬಳಿ ಬಿಟ್ಟಿತು. ಮಂಗ ಛಂಗನೆ ದಡಕ್ಕೆ ನೆಗೆದು ಮರವೇರಿ ಬಿಟ್ಟಿತು. ಮಂಗಣ್ಣನ ಹೆಂಡತಿಗೆ ಕಾಯುತ್ತಿದ್ದ ಮೊಸಳೆಯನ್ನು ನೋಡಿ, "ನಿನ್ನಂಥ ವಿಶ್ವಾಸದ್ರೋಹಿ ಮೋಸಗಾರನನ್ನು ನಂಬಬಾರದಿತ್ತು. ಇಂದಿಗೆ ನನ್ನ ನಿನ್ನ ಸ್ನೇಃ ಕೊನೆಗೊಂಡಿತು. ಇಲ್ಲಿಂದ ತೊಲಗು' ಎಂದು ಛೀಮಾರಿ ಹಾಕಿತು. 

ಮೊಸಳೆಗೆ ತಪ್ಪಿನ ಅರಿವಾಗಿ ಪಶ್ಚಾತಾಪ ಪಡುತ್ತಾ ಮರಳಿ ಹೋಯಿತು. 

ನೀತಿ : ಉಪಾಯವಿದ್ದರೆ ಅಪಾಯವಿಲ್ಲ

ಕೃಪೆ: ಅಣ್ಣಾಜಿ ಫ‌ಡತಾರೆ (ಉದಯವಾಣಿ)

No comments:

Post a Comment

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...