ಸರ್ವಜ್ಞನ 21 ವಚನಗಳು.
1. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದ, ದೇಶ
ದಾಟವೇ ಕೆಡಗು, ಸರ್ವಜ್ಞ
2. ಊರಿಂಗೆ ದಾರಿಯನು , ಆರು ತೋರಿದೊಡೇನು
ಸಾರಾಯದ ನಿಜವ ತೋರುವ ಗುರುವು ತಾ
ನಾರಾದರೇನು ? ಸರ್ವಜ್ಞ
3. ಆರು ಬೆಟ್ಟವನೊಬ್ಬ ಹಾರಬಹುದೆಂದರೆ
ಹಾರಬಹುದೆಂದು ಎನಬೇಕು, ಮೂರ್ಕನೊಡ
ಹೋರಾಟ ಸಲ್ಲ ಸರ್ವಜ್ಞ
4. ಅನ್ನವನು ಇಕ್ಕುವನು ಉನ್ನತವ ಪಡೆಯುವನು
ಉನ್ನತನು ಅಪ್ಪಯತಿಗಿಕ್ಕಿದಾ ಲೋಬಿ ತಾ
ಕುನ್ನಿಗೂ ಕಿರಿಯ ಸರ್ವಜ್ಞ
5. ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ
6. ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗೆ
ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ
7. ಅನ್ಯಸತಿಯನ್ನು ಕಂಡು, ತನ್ನ ಹೆತ್ತವಳೆಂದು
ಮನ್ನಿಸಿ ನೆಡೆದ ಪುರುಷಂಗೆ, ಇಹಪರದಿ
ಮುನ್ನ ಭಯವಿಲ್ಲ ಸರ್ವಜ್ನ
8. ಅನ್ನ ದಾನಗಳಿಂತ ಮುನ್ನ ದಾನಗಳಿಲ್ಲ
ಅನ್ನಕೆ ಮಿಗಿಲು ಇನ್ನಿಲ್ಲ, ಜಗದೊಳಗೆ
ಅನ್ನವೇ ಪ್ರಾಣ ಸರ್ವಜ್ಞ
9. ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು
ಪರದೇಶಿಯಂತೆ ಇರುತಿರ್ಪಯೋಗಿಯನು
ಪರಮಗುರುವೆಂಬೆ ಸರ್ವಜ್ಞ
10. ಉದ್ದಿನ ವಡೆ ಲೇಸು, ಬುದ್ಧಿಯ ನುಡಿ ಲೇಸು
ಬಿದ್ದೊಡನೆ ಕೈಗೆ ಬರಲೇಸು, ಶಿಶುವಿಗೆ
ಮುದ್ದಾಟ ಲೇಸು, ಸರ್ವಜ್ಞ
11. ಉಣಬಂದ ಜಂಗಮಗೆ ಉಣಬಡಿಸಲೋಲ್ಲದಲೆ
ಉಣದಿಪ್ಪ ಲಿಂಗಕುಣಬಡಿಸಿ , ಕೈ ಮುಗಿವ
ಬಣಗುಗಳ ನೋಡಾ, ಸರ್ವಜ್ಞ
12. ಇಂದ್ರನಾನೆಯ ನೇರಿ ಒಂದನೂ ಕೊಡಲರಿಯ
ಚಂದ್ರಶೇಕರನು ಮುದಿ ಎತ್ತನೇರಿ
ಬೇಕೆಂದುದನು ಕೊಡುವೆ - ಸರ್ವಜ್ಞ
13. ಅಲ್ಲಿಪ್ಪನಿಲ್ಲಿಪ್ಪನೆಲ್ಲಿಪ್ಪ ನೆನಬೇಡ
ಕಲ್ಲಿನಂತಿಪ್ಪ ಮಾನವನ, ಮನ ಕರಗೆ
ಅಲ್ಲಿಪ್ಪ ನೋಡ ಸರ್ವಜ್ಞ
14. ನಂದಿಯನು ಏರಿದನ
ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ
ಮುಂದೆ ಹೇಳುವೆನು ಸರ್ವಜ್ಞ
15. ಮುನ್ನ ಕಾಲದಲಿ ಪನ್ನಗಧರನಾಳು
ಎನ್ನೆಯ ಪೆಸರು, ಪುಷ್ಪದತ್ತನು ಎಂದು
ಮನಿಪರು ದಯದಿ ಸರ್ವಜ್ಞ
16. ಅಡಿಕೆ ಇಲ್ಲದ ವೀಳ್ಯ, ಕಿಡಕಿ ಇಲ್ಲದ ಮನೆಯು
ಒಡಕು ಬಾಯವಳ ಮನೆವಾರ್ತೇ ಎಣ್ಣೆಯ
ಕುಡಿಕೆಯೊಡೆದಂತೆ ಸರ್ವಜ್ಞ
17. ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ
18. ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣೆಸಿಬರೆದ ಪಟದೊಳಗೆಯಿರುವಾತ
ತಣ್ಣೊಳಗೆ ಇರನೇ ಸರ್ವಜ್ಞ
19. ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು
ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ
ಕುಲವನರಸುವರೆ ಸರ್ವಜ್ಞ
20. ಇಕ್ಕಿದಾತನು ಉಂಡು, ನಕ್ಕು ಸ್ವರ್ಗಕ್ಕೆ ಹೋದ
ಇಕ್ಕದನು ಹೋದ ನರಕಕ್ಕೆ, ಲೋಕದೊಳ್ಳ
ಗಿಕ್ಕಲೇಬೇಕು, ಸರ್ವಜ್ಞ
21. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ, ಮುಂದೆ
ಕಟ್ಟಿಹುದು ಬುತ್ತಿ, ಸರ್ವಜ್ಞ
ವಚನಗಳ
ಭಾಗ ಮುಂದುವರಿಯುವುದು...
No comments:
Post a Comment