ಸಾಧಕರು: ಡಾ. ಎ.ಪಿ. ಜೆ ಅಬ್ದುಲ್ ಕಲಾಂ.
ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿಗಳು, ಲೇಖಕರು, ಚಿಂತಕರು ಆಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಎಲ್ಲಾ ವಯಸ್ಸಿನ ಮತ್ತು ಎಲ್ಲಾ ಹಿನ್ನೆಲೆಯ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅವರ ಬದ್ಧತೆ ಮತ್ತು ದೇಶಕ್ಕೆ ಅವರ ಸೇವೆ ಅವರಿಗೆ "ದೇಶದ ಕ್ಷಿಪಣಿ ಮನುಷ್ಯ ( Missile Man of India) ಎಂಬ ಬಿರುದನ್ನು ತಂದು ಕೊಟ್ಟಿದೆ.
ಬಾಲ್ಯ ಜೀವನ:
ಡಾ. ಎ.ಪಿ. ಜೆ ಅಬ್ದುಲ್ ಕಲಾಂ ಅವರು, ಅಕ್ಟೋಬರ್ 15,1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು, ಅವುಲ್ ಫಕೀರ್ ಜೈನಯಲಾಬ್ದೀನ್ ಅಬ್ದುಲ್ ಕಲಾಂ. ಇವರ ತಂದೆಯ ಹೆಸರು ಜೈನುಲಬ್ದೀನ್, ತಾಯಿ ಆಶೀಮಾ. ತಂದೆ ದೋಣಿಯ ಚಲಾಯಿಸುವ ವೃತ್ತಿ ಮಾಡುತ್ತಿದ್ದರೇ, ತಾಯಿ ಗೃಹಣಿ. ಇವರಿಗೆ ಐದು ಮಂದಿ ಸಹೋದರರು. ಅದರಲ್ಲಿ ಅಬ್ದುಲ್ ಕಲಾಂ ಅವರೇ ಚಿಕ್ಕವರು.
ವಿದ್ಯಾಭ್ಯಾಸ:
ಅಬ್ದುಲ್ ಕಲಾಂ ಅವರ ವಿದ್ಯಾರ್ಥಿ ಜೀವನವು ಕಷ್ಟಗಳು ಮತ್ತು ಹೋರಾಟಗಳಿಂದ ಕೂಡಿತ್ತು. ಆರಂಭಿಕ ದಿನಗಳಲ್ಲಿ ಅವರು ಮನೆ ಮನೆಗೆ ತೆರಳಿ ಪತ್ರಿಕೆಗಳನ್ನು ಮಾರಟ ಮಾಡುತ್ತಿದ್ದರು. ಅಬ್ದುಲ್ ಕಲಾಂ ಅವರ ಬದ್ಧತೆ ಮತ್ತು ಶಿಕ್ಷಣದ ಮೇಲಿನ ಪ್ರೀತಿ ಈ ಎಲ್ಲಾ ಕಷ್ಟಗಳನ್ನು ಎದುರಿಸಿ, ಮುಂದೇ ವಿಜ್ಞಾನಿಯಾಗಿ, ಭಾರತದ ಸಾಂವಿಧಾನಿಕ ಹುದ್ದೆ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುವಂತೆ ಮಾಡಿತು. ಈ ಮೂಲಕ ಯುವ ಪೀಳಿಗೆಗೆ ಸ್ಪೋರ್ತಿ ಮತ್ತು ರೋಲ್ ಮಾಡೆಲ್ ಆಗಿ ಉಳಿದಿದ್ದಾರೆ.
ಅಬ್ದುಲ್ ಕಲಾಂ ಅವರು ಶ್ವಾರ್ಟ್ಜ್ ಮೆಟ್ರಿಕ್ಯುಲೇನ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಅವರು, ನಂತರ ತಿರುಚಿರಾಪಳ್ಳಿಯಲ್ಲಿ ಸೇಂಟ್ ಜೋಸೆಫ್ಸ್ ಕಾಲೇಜಿಗೆ ಸೇರಿಕೊಂಡರು. ಅಲ್ಲಿಂದ ನಂತರ 1954 ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಬೌತಶಾಸ್ತ್ರ ಪದವಿಯನ್ನು ಪಡೆದುಕೊಂಡರು. ನಂತರ ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್‌ಗೆ ತೆರಳಿದರು.
ಅಬ್ದುಲ್ ಕಲಾಂ ಅವರ ಮಹತ್ವದ ಸಾಧನೆಗಳು:
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಾರತದ ಎರಡು ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಗಳಾದ ರಕ್ಷಾಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನೇತೃತ್ವ ವಹಿಸಿದ್ದರು.
ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವನ್ನು(ಎಸ್‌ಎಲ್‌ವಿ) ಅಭಿವೃದ್ಧಿ ಪಡಿಸುವ ಯೋಜನೆಗೆ ಡಾ. ಕಲಾಂ ಅವರು ಇಸ್ರೋದಲ್ಲಿ ಸ್ತಳೀಯ ಉಪಗ್ರಹ ಉಡಾವಣಾ ವಾಹನದ ಅಭಿವೃದ್ಧಿಗೆ ಯೋಜನಾ ನಿರ್ದೇಶಕರಾಗಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದರು.
ಜುಲೈ 1980 ರಲ್ಲಿ ಕಲಾಂ ಅವರ ಮಾರ್ಗದರ್ಶನದಲ್ಲಿ ಭಾರತದ ಎಸ್‌ಎಲ್‌ವಿ-3 ರೋಹಿಣಿ ಉಪಗ್ರಹವನ್ನು ಭೂಮಿಯ ಸಮೀಪ ಕಕ್ಷೆಯಲ್ಲಿ ಯಶಸ್ವಿಯಾಗಿ ನಿಯೋಜಿಸಿ, ಭಾರತವನ್ನು ವಿಶೇಷ ಬಾಹ್ಯಾಕಾಶ ಕ್ಲಬ್‌ನ ಸದಸ್ಯರನ್ನಾಗಿ ಮಾಡಿದರು.
ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಪ್ರೋಖ್ರಾನ್‌ನಲ್ಲಿ ಅನೇಕ ಪರಮಾಣು ಪರೀಕ್ಷೆಗಳ ನೇತೃತ್ವ ವಹಿಸಿದ್ದರು. ಅಂದಿನ ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರರಾಗಿ, ಪ್ರೋಖ್ರಾನ್-II ಪರಮಾಣು ಪರೀಕ್ಷೆಗಳ ಮುಖ್ಯಸ್ಥರಾಗಿ ಪ್ರಮುಖ ಪಾತ್ರ ವಹಿಸಿದ್ದರು.
ಅಬ್ದುಲ್ ಕಲಾಂ ಅವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅಬ್ದುಲ್ ಕಲಾಂ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. "ವಿಂಗ್ಸ್ ಆಫ್ ಫೈರ್" ಎಂಬುದು ಇವರ ಆತ್ಮಕಥೆಯಾಗಿದೆ. ಇವರು ಇಂಡಿಯಾ ಮೈ ಡ್ರೀಮ್, ಇಂಡಿಯಾ 2020, ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇಗಳನ್ನು ಹಾಕಿಕೊಟ್ಟಿದ್ದಾರೆ. ಮೈ ಜರ್ನಿ, ಟಾರ್ಗೆಟ್ ತ್ರಿ ಬಿಲಿಯನ್ ಇವು ಅವರ ಪ್ರಸಿದ್ದ ಪುಸ್ತಕಗಳಾಗಿವೆ.
ಕಲಾಂ ರವರಿಗೆ ದೊರಕಿರುವ ಪ್ರಶಸ್ತಿಗಳು:
ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಒಲೆದು ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ದೇಶದ ಐಕ್ಯತೆಯ ಇಂದಿರಾ ಗಾಂಧಿ ಪ್ರಶಸ್ರಿ, ರಾಮಾನುಜನ್ ಪ್ರಶಸ್ತಿ, ವೀರ್ ಸಾವರ್ಕರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ. 1997 ರಲ್ಲಿ ಅಬ್ದುಲ್ ಕಲಾಂ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಯಿತು. ಇದಲ್ಲದೇ 1990ರಲ್ಲಿ ಪದ್ಮ ವಿಭೂಷಣ ಹಾಗೂ 1981 ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ.
ಸರಳತೆ ಮತ್ತು ಉನ್ನತ ಚಿಂತನೆಗೆ ಹೆಸರಾಗಿದ್ದ ಇವರು, ಉಪನ್ಯಾಸ ನೀಡುತ್ತಲೇ ಜುಲೈ 27, 2015 ರಲ್ಲಿ ಶಿಲ್ಲಾಂಗ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಕೊನೆಯುಸಿರೆಳೆದರು. ಇಂದಿಗೂ ಇವರನ್ನು ಅತ್ಯುತ್ತಮ ಮಾನವರಲ್ಲಿ ಒಬ್ಬರಾಗಿ ನೆನಪಿಸಿಕೊಳ್ಳಲಾಗುತ್ತದೆ ಮತ್ತು ಪ್ರಪಂಚದಾದ್ಯಂತ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದಾರೆ.
No comments:
Post a Comment