ಕೆ. ಪಿ ಪೂರ್ಣಚಂದ್ರ ತೇಜಸ್ವಿಯವರ ಕೆಲವು ಪರಿಸರ ಸಂಬಂಧಿತ ಸಂದೇಶಗಳು:
1. ಈ ಜೀವ ಸಮುಚ್ಚಯದಲ್ಲಿ ಕ್ರಿಮಿಕೀಟಗಳು ಪಶುಪಕ್ಷಿಗಳು ತೋರಿಸುತ್ತಿರುವಷ್ಟು ಹೊಂದಾಣಿಕೆ ಮತ್ತು ಸಾಮರಸ್ಯಗಳನ್ನು ವಿವೇಕಿ ಮತ್ತು ಬುದ್ಧಿವಂತನಾದ ಮಾನವ ತೋರಿಸಲು ಸಾಧ್ಯವಿಲ್ಲವೇ? ಎನ್ನುವುದೇ ಈಗ ನಮ್ಮ ಮುಂದೆ ಇಕಾಲಜಿ ಇಟ್ಟಿರುವ ಪ್ರಶ್ನೆ.
2. ಈ ಜಗತ್ತು ವಿಸ್ಮಯಗಳ ಅಕ್ಷಯ ಪಾತ್ರೆ
3. ನಮ್ಮ ಸದ್ಯದ ಜೀವನಕ್ರಮ ಮತ್ತು ವಿಕಾಸದ ಒತ್ತಡಗಳು ನಮ್ಮನ್ನು ಎಲ್ಲಿಗೆ ಒಯ್ಯುತ್ತಿವೆಯೋ ಬಲ್ಲವರಾರು?
4. ಪರಿಸರ ಅನ್ನೋದು ಏನು? ಮನುಷ್ಯನ ಸಮಾಜ ಅನ್ನೋದು ಮತ್ತು ಮನುಷ್ಯನ ಆತ್ಮ ಅನ್ನೋದು ಈ ಮೂರು ಹಾಳಾದರು ಒಟ್ಟಿಗೆ ಹಾಳಾಗೋದು; ಉದ್ಧಾರ ಆದರೂ ಒಟ್ಟಿಗೆ ಉದ್ಧಾರ ಆಗೋದು!
5. ಕಾಲದೊಂದಿಗೆ ಸಂಸ್ಕೃತಿ ಬದಲಾಗುತ್ತಾ ಇರುತ್ತದೆ . ಬೇಕಾದದ್ದನ್ನು ಇಟ್ಟುಕೊಳ್ಳುತ್ತದೆ. ಬೇಡವಾದದ್ದನ್ನು ಬಿಡುತ್ತದೆ.
6. ಜೀವನ ಮಟ್ಟವನ್ನು ನಿರಂತರವಾಗಿ ಏರಿಸಬೇಕೆನ್ನುವ ದುರಾಸೆಯಲ್ಲಿ ಪ್ರಕೃತಿದತ್ತವಾದ ಸಂಪನ್ಮೂಲಗಳನ್ನೆಲ್ಲಾ ಮನುಷ್ಯ ಯದ್ವಾತದ್ವಾ ಲೂಟಿ ಮಾಡುತ್ತಿದ್ದಾನೆ.
7. ಯಾಂತ್ರಿಕ ಬದುಕು ಮನುಷ್ಯನನ್ನು ತನ್ನ ಪರಿಸರದಿಂದ ಹಾಗೂ ಕೌಟುಂಬಿಕ ಮಾನವೀಯ ವಾತಾವರಣದಿಂದ ಪ್ರತ್ಯೇಕಿಸುತ್ತಾ ತಾನೊಂದು ವಿಶ್ವಸಮಾಜದ ಅಂಶ ಎನ್ನುವ ತಿಳುವಳಿಕೆ ಮರೆಯಾಗುತ್ತಾ ಇದೆ. ಸಜೀವ ಜಗತ್ತಿನ ಸರ್ವ ಚರಾಚರ ವಸ್ತುಗಳೊಂದಿಗೇ ತಾನು ಬದುಕಬೇಕೆಂಬ ಅರಿವು ಮಾಯವಾಗುತ್ತಿದೆ. ಇದರಿಂದಾಗಿ ಆಧುನಿಕ ನಾಗರಿಕತೆಯ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
8. ಪರಿಸರವನ್ನು ಉಳಿಸ್ಬೇಕು ಅಂತಿದ್ದರೆ, ಮಕ್ಕಳಿಗೆ ಶಿಕ್ಷಣ ಕೊಡುವುದೇ ಅತ್ಯುತ್ತಮ ವಿಧಾನ. ಯಾಕೆಂದರೆ ಈ ದೊಡ್ಡವರ ಬುದ್ಧಿ ಬದಲಾಯಿಸುವುದು ವಿಪರೀತ ಕಷ್ಟ. ಎಷ್ಟು ಹೇಳಿದ್ರೂ ಅರ್ಥ ಆಗೋದಿಲ್ಲ. ಅದೇ ಮಕ್ಕಳಿಗೆ ಅವರ ಟೀಚರ್ ಹೇಳಿಬಿಟ್ರು ಅಂದ್ರೆ ವೇದವಾಕ್ಯ ಅದು.
9. ವಿಶ್ವಪರಿಸರ ಸಂರಕ್ಷಣೆಯ ಹೋರಾಟಕ್ಕೆ ನಮ್ಮ ಓಬೀರಾಯನ ಕಾಲದ ನ್ಯಾಯ ಸಂಹಿತೆಗಳು ಮತ್ತು ಅಂಥದೇ ದೃಷ್ಟಿಕೋನವಿರುವ ನ್ಯಾಯಾಂಗಗಳು ಬಹು ದೊಡ್ಡ ಅಡ್ಡಿಯಾಗಿದ್ದಾರೆ. ಕಾಲ ಮೀರುವ ಮೊದಲೇ ನ್ಯಾಯಾಂಗ ಇದನ್ನು ತಿಳಿದು ತಾನೆ ಸ್ವತಃ ಏನಾದರೂ ಮಾಡದಿದ್ದರೆ ಬಹು ದೊಡ್ಡ ಅಪಕೀರ್ತಿಗೆ ಒಳಗಾಗಬೇಕಾಗುತ್ತದೆ.
10. ಆಹಾರದ ಪಿರಮಿಡ್ಡಿನ ಯಾವೊಂದು ಜೀವಸಂತಾನದ ಅಳಿವೂ ಕೊನೆಗೆ ಮುಂಬರಲಿರುವ ತನ್ನ ನಿರ್ವಂಶದ ಮುನ್ನುಡಿಯೇ ಎಂದು ಮಾನವನಿಗೆ ನಿಧಾನವಾಗಿ ಅರಿವಾಗುತ್ತಿದೆ.
11. ಇಕಾಲಜಿ ಎಂದರೆ ಇಡೀ ಜೀವಸ್ತರದ ಪರಸ್ಪರ ಸಂಬಂಧ, ಅವಲಂಬನೆಗಳ ಅಭ್ಯಾಸ. ಇಡೀ ವಿಶ್ವದ ಜೀವಸಮಸ್ತವನ್ನೂ ಅದರ ಪರಿಸರವನ್ನೂ ಒಂದು ವ್ಯಕ್ತಿತ್ವವನ್ನಾಗಿ ಕಾಣುವ ದರ್ಶನ.
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
No comments:
Post a Comment