Sunday 4 August 2024

ಕುವೆಂಪುರವರ ಭಗವಾನ್ ಬುದ್ಧರ ಕವಿತೆ | Kuvempu poem on Bhagavan Buddha

ಏಷ್ಯಾದ ಬೆಳಕೆಂದೇ ಜಗತ್ಪ್ರಸಿದ್ಧಿ ಪಡೆದ ಭಗವಾನ್ ಬುದ್ಧರು ಕಾಲದೇಶಗಳನ್ನು ಮೀರಿ ವಿಶ್ವದುದ್ದಕ್ಕೂ ಬೆಳೆದ ಮಹಾನ್ ಮಾನವತಾವಾದಿ. ಅಹಿಂಸೆ, ಸತ್ಯ, ಕಾರುಣ್ಯವನ್ನೇ ಧರ್ಮವಾಗಿಸಿದ ಬುದ್ಧನ ಕುರಿತು ರಾಷ್ಟ್ರಕವಿ ಕುವೆಂಪು ಬರೆದ ಕವಿತೆ.

ಬುದ್ಧದೇವ:

ವಿಕಸಿತ ಸಹಸ್ರದಲ ಪದ್ಮಪೀಠದ ಮೇಲೆ

ಮಂಡಿಸಿಹ ಧವಲಿಮಾ ಧ್ಯಾನಸ್ತಿಮಿತಮೂರ್ತಿ,

ಹೇ ಬುದ್ಧದೇವ, ನಿನ್ನತುಲ ಬುದ್ಧಿಸ್ಫೂರ್ತಿ

ಮಾನವನ ಮೂರ್ಖತೆಯ ದಹಿಸುವ ಮಹಾಜ್ವಾಲೆ.

ಅರ್ಥವಿಲ್ಲದ ಕರ್ಮತತಿಯ ಮರುರಂಗದಲಿ

ಶುಷ್ಕ ಆಚಾರಸೈಕತದಲ್ಲಿ ನಡೆಗೆಟ್ಟು

ನಿರ್ಮಲ ವಿಚಾರನದಿ ಲಯವಾಗುತಿರೆ; ಕಟ್ಟು

ಕಟ್ಟಳೆಯ ಲೌಹ ಶೃಂಖಲೆಯ ಯಮಸಂಗದಲಿ

ಕುಬ್ಜವಾಗುತಲಿರಲು ಧರ್ಮದ ಮಹೋನ್ನತಿಯು,

ವೈರಾಗ್ಯವರ್ಷವನು ಕರೆದು, ಜನರಲಿ ಮತಿಯು

ಶ್ರುತಿಯ ಬಂಡೆಯ ಬಿರಿದು ಮೂಡುವಂತೆಸಗಿರುವೆ!

ಹೇ ಪುಣ್ಯಮತಿಮೂರ್ತಿ, ಮತದ ಮತಿಹೀನತೆಯು

ಸಾಕೆಮಗೆ; ಬೇಕು ಸನ್ಮತಿಯ ನಾಗರಿಕತೆಯು:

ನರನ ಸನ್ಮತಿಗಿಂತ ಬೇರೆಯ ಜಗದ್ಗುರುವೆ?

- ಕುವೆಂಪು

No comments:

Post a Comment

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...