ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ:
1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡಿಯಲ್ಲಿ ಈಶ್ವರನು ಪ್ರಕಾಶವಾಗನು, ದೆವ್ವ ದೇವರುಗಳಿಗೆ ಕಟ್ಟುವ ಕಾಣಿಕೆಯ ಹಣವನ್ನು ಎಣ್ಣೆ, ಸೀಗೆ, ಸಾಬೂನುಗಳಿಗೆ ಉಪಯೋಗಿಸಿದರೆ ಆತನು ನಮ್ಮನ್ನು ಇನ್ನೂ ಹೆಚ್ಚಾಗಿ ಒಲಿಯುತ್ತಾನೆ. ಏಕೆಂದರೆ, ಆತನಿಗೆ ಬೇಕಾದುದು ನಮ್ಮ ಹೃದಯದ ಸರಳ ಭಕ್ತಿ, ನಮ್ಮ ಕಬ್ಬಿಣದ ಪಿಠಾರಿಯ ದುಡ್ಡಲ್ಲ.
2. ಕಣ್ಣಿನ ಕಾಂತಿ, ಮನಸ್ಸಿನ ಶಾಂತಿ, ಮುಖದ ತೇಜಸ್ಸು, ಆತ್ಮದ ಓಜಸ್ಸು, ದೇಹದ ಉಲ್ಲಾಸ, ಹೃದಯದ ಉತ್ಸಾಹ ಎಲ್ಲವನ್ನೂ ಕಳೆದುಕೊಂಡು ಜೀವಶವಗಳಂತೆ ಇರುವವರಿಂದ ನಾಡಿಗಾದರೂ ಜನರಿಗಾದರೂ ಏನು ಉಪಯೋಗವಾದೀತು?
3. ಹುಟ್ಟುವುದು ಸಾಯುವುದರಂತೆಯೇ ವಿವಾಹವೂ ಜೀವನದ ಮಹಾ ಘಟನೆಗಳಲ್ಲಿ ಒಂದಾಗಿದೆ. ಮದುವೆಗೆ ಮದುವೆಯ ಸಂಭ್ರಮವೇ ಗುರಿಯಲ್ಲ, ಮುಂದಿನ ಸುಖ, ಸಮಾಜ ಸೇವೆ ಇತ್ಯಾದಿಗಳು ಅದರ ಗುರಿ. ವಿವಾಹವು ನಡೆಯುವ ಹಾದಿಯೆ ಹೊರತು, ಸೇರುವ ಮನೆಯಲ್ಲ.
4. ಆದರ್ಶವಿರುವುದು ಅದರಂತಾಗುವುದಕ್ಕೆ, ಅದಾಗುವುದಕ್ಕೆ. ನಾವು ಯಾರನ್ನು ಗೌರವಿಸುತ್ತೇವೆಯೋ ಅವರ ಗುಣಗಳೇ ನಮ್ಮಲ್ಲಿ ಮೂಡುತ್ತವೆ.
5. ಸಗಣಿಯವನೊಡನೆ ಸರಸವಾಡುವುದಕ್ಕಿಂತ ಗಂಧದವನೊಡನೆ ಗುದ್ದಾಡುವುದು ಲೇಸು. ಸರಸವಾಡಿದರೂ ಸಗಣಿಯವನೊಡನೆ ನಮಗೆ ದೊರಕುವುದು ದುರ್ವಾಸನೆ. ಗುದ್ದಾಡಿದರೂ ಗಂಧದವನಿಂದ ಪರಿಮಳ ಲಭಿಸುತ್ತದೆ.
6. ದೇವರಿಗೆ ಕೋಳಿ ಕುರಿಗಳ ಬಲಿಯೂ ಬೇಡ, ವಜ್ರ ಕಿರೀಟಗಳೂ ಬೇಡ. ಆತನಿಗೆ ಬೇಕಾದುದು ಭಕ್ತಿ. ಭಕ್ತಿಯಿಂದ ತೃಣವನ್ನು ನಿವೇದಿಸಿದರೂ ಆತನು ಸಂತೃಪ್ತನು.
7. ಹೊಳೆಯಲ್ಲಿ ಪ್ರಯಾಣಮಾಡುವ ಮೊದಲು ದೋಣಿ ಸಾರಿಯಾಗಿದೆಯೆ ಬಿರುಕು ಬಿಟ್ಟಿದೆಯೆ ನೋಡಿಕೊಳ್ಳಬೇಕು. ನಡುಹೊಳೆಯಲ್ಲಿ ನೀರು ತುಂಬಿ ದೋಣಿ ಮುಳುಗುವಾಗ ಗೋಳಾಡಿದರೆ ಪ್ರಯೋಜನವಿಲ್ಲ.
8. ನಿಮ್ಮ ಕನ್ಯೆಯರಿಗೆ ಸೇರು ಬಂಗಾರದ ಕೊರಳ ಹಾರಕ್ಕಿಂತಲೂ ಮುದ್ದಾದ ಕನ್ನಡದ ಅಕ್ಷರಮಾಲೆಯೆ ರಮಣೀಯತರ ಅಲಂಕಾರ. ವಿದ್ಯೆಯ ಸೌಂದರ್ಯ ಸಜೀವ ಸೌಂದರ್ಯ, ಚಿನ್ನದ ಚೆಲುವು ಹೆಣದಂತೆ.
9. ಮತ ನಮಗೊಂದು ದೊಡ್ಡ ಬಂಧನವಾಗಿದೆ. ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ.
10. ಸರ್ವ ಮತಗಳಿಗಿಂತಲೂ ಶುದ್ಧ ಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದುದು. ಆ ಗುರು, ಆ ಆಚಾರ್ಯ, ಆ ಧರ್ಮಶಾಸ್ತ್ರ, ಆ ಮನುಸ್ಮೃತಿ ಮೊದಲಾದವು ಏನೇ ಹೇಳಲಿ, ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ.
11. ನಮ್ಮ ಉತ್ಸಾಹ ಹುಲ್ಲಿನ ಬೆಂಕಿಯಾಗಬಾರದು, ಕಲ್ಲಿದ್ದಲ ಕಾವಾಗಬೇಕು.